ಜಾನಪದ ವಸ್ತುಸಂಗ್ರಹಾಲಯಗಳು -
ಜನಪದ ಜೀವನಕ್ಕೆ ಸಂಬಂಧಿಸಿದ ಎಲ್ಲ ವಸ್ತುಗಳನ್ನೂ ಸಂಗ್ರಹಿಸಿ ವಿಂಗಡಿಸಿ ಪ್ರದರ್ಶಿಸುವ ಸಂಸ್ಥೆಗಳು. ಒಟ್ಟಿನಲ್ಲಿ ಹೇಳುವುದಾದರೆ ಸಮಗ್ರ ಜಾನಪದ ವಸ್ತುಗಳು ಇಲ್ಲಿರುತ್ತವೆ. 			(ನೋಡಿ- ಜಾನಪದ)

ಈ ವಸ್ತುಗಳ ಸಂಗ್ರಹಕಾರ್ಯದಲ್ಲಿ ಆಯ್ಕೆಯ ವಿಧಾನವನ್ನು ಅನುಸರಿಸದೆ ಸಮಗ್ರವಾಗಿ ಸಿಕ್ಕಿದ್ದೆಲ್ಲವನ್ನೂ ಕಲೆಹಾಕುವುದು ಅಗತ್ಯ. ಕೃಷಿಸಾಧನಗಳು, ಮರಮುಟ್ಟುಗಳು, ಬಡಗಿ, ಕಮ್ಮಾರ, ಅಕ್ಕಸಾಲಿಗೆ ಉಪಕರಣಗಳು, ಮಿಕ ಮೀನು ಬೇಟೆಯ ಸಲಕರಣೆಗಳೂ; ಕುಂಬಾರ ಕಮ್ಮಾರ ಮೇದ ಮಗ್ಗಗಾರ ಹೂವಾಡಿಗ ಕುರುಬ ಕುಂಚುಗಾರ ಕಲ್ಲುಕುಟುಗ ಮತ್ತು ಗಿರಿಜನರು ಮೊದಲಾದವರು ಕಸುಬಿನ ಹತಾರಗಳು. ಹಬ್ಬಹರಿದಿನಗಳಲ್ಲಿ ಮದುವೆ ವಿಧಿಗಳಲ್ಲಿ ಬಳಸುವ ವಸ್ತುವಿಶೇಷಗಳು; ಕಾಳರಟ್ಟು, ತಮಟೆ ಮೊದಲಾದ ವಾದ್ಯಗಳು, ಉಡಿಗೆತೊಡಿಗೆಗಳು, ಒಡವೆಗಳು, ಗರಡಿಯ ಸಾಧನಗಳು, ಕಸೂತಿ ಸಾಮಾನು, ಮನೆಯ ಪಾತ್ರೆಪರಡಿ ಊಲಗಗಳು, ಆಯುಧ ವಿಶೇಷಗಳು, ಕಲ್ಲುಮಣ್ಣು ಮರ ಲೋಹಗಳ ವಿಗ್ರಹಗಳು ಚಿತ್ರಗಳು, ಮೂರ್ತಿಶಿಲ್ಪದ ಮಾದರಿಗಳು, ದೇವಾಲಯದ ಸಾಮಗ್ರಿಗಳು, ಪೂಜಾಸಲಕರಣೆಗಳು, ದೇವತೆ ಭೂತ ಪಿಶಾಚ ನಮೂನೆಗಳು, ರಂಗವಲ್ಲಿ ಚಿತ್ರಗಳು, ಹಿಂದಿನ ಮನೆ ಮಾದರಿಗಳು, ಉರಿಮಾರಮ್ಮ, ಕೋಲುಬಸವಗಳಿಗೆ ತೊಡಿಸುವ ಬಟ್ಟೆಬರೆಗಳು, ಆದಿವಾಸಿಗಳ ಬಳಕೆಯ ವಸ್ತುಗಳು, ದಾಸಯ್ಯ, ಜೋಗಯ್ಯ, ಗೊರವಯ್ಯಾದಿಗಳ ವೇಷಭೂಷಣಗಳು _ ಇವೆಲ್ಲವೂ ಸಂಗ್ರಹಾಲಯದಲ್ಲಿ ಸ್ಥಾನವಿರಬೇಕು. ಹಾಗಾದಾಗಲೇ ಅದರ ಸಂಪೂರ್ಣ ರೂಪು ಕಾಣಲು ಸಾಧ್ಯ.

	ಜಾನಪದ ವಸ್ತುಸಂಗ್ರಹಾಲಯದ ಸ್ಥಾಪನೆಗೆ ಮೊದಲು ಕೈಹಾಕಿದವ ಸ್ವೀಡನ್ನಿನ ಆರ್ಥರ್ ಹೆಜಿಲಿಯಸ್ ಎಂಬಾತ. 1872ರಲ್ಲಿ ಸ್ಟಾಕ್ ಹೋಮಿನಲ್ಲಿ ಈ ಕಾರ್ಯವನ್ನು ಆರಂಭಿಸಿದ. ಖಾಸಗಿಯಾಗಿ ಆರಂಭವಾದ ಈ ಕಾರ್ಯ ಬೆಳೆದು ಕ್ರಮೇಣ ರಾಷ್ಟ್ರೀಯ ಸ್ವತ್ತಾಗಿ ಪರಿಣಮಿಸಿತು. ಪರಂಪರೆಯಿಂದ ಬಳಕೆಯಲ್ಲಿದ್ದ ಎಲ್ಲ ವಸ್ತುಗಳಿಗೂ ಅಲ್ಲಿ ಸ್ಥಾನ ದೊರೆಯಿತು. ಈ ಸಂಗ್ರಹಾಲಯ ಇತರ ರಾಷ್ಟ್ರಗಳಿಗೂ ಮಾದರಿಯಾಯಿತು. ನಾರ್ವೆ, ಡೆನ್ಮಾಕ್, ಜರ್ಮನಿ, ಹಾಲಂಡ್ ಮುಂತಾದ ರಾಷ್ಟ್ರಗಳು ತಮ್ಮ ನಾಡಿನ ಗ್ರಾಮೀಣ ಬದುಕನ್ನು ಪ್ರತಿಬಿಂಬಿಸುವ ವಸ್ತುಗಳನ್ನು ಸಂಗ್ರಹಿಸಿದರು. ಅಮೆರಿಕ ತಡವಾಗಿ ಈ ಕಾರ್ಯವನ್ನು ಆರಂಭಿಸಿತಾದರೂ ಹಂತಹಂತವಾಗಿ ಸುವ್ಯವಸ್ಥಿತವಾದ ಸಂಗ್ರಹಾಲಯವೊಂದನ್ನೂ ನಿರ್ಮಿಸಿತು. ಮಿಚಿಗನ್ನಿನಲ್ಲಿ ಹೆನ್ರಿ ಫೋರ್ಡ್‍ನಿಂದ 1929ರಲ್ಲಿ ಸ್ವೀಡಿಷ್ ಸಂಗ್ರಹಾಲಯದಂತೆ ಸುವ್ಯವಸ್ಥಿತವಾಗಿ ಜಾನಪದ ವಸ್ತು ಸಂಗ್ರಹಾಲಯವೊಂದು ರೂಪುಗೊಂಡಿತು.

	ಸ್ವೀಡನ್ನಿನ 700ಕ್ಕೂ ಮಿಕ್ಕಿದ ಬಯಲು ವಸ್ತುಸಂಗ್ರಹಾಲಯಗಳಿವೆ. ಇವುಗಳಲ್ಲಿ ಬಹುತೇಕ ಜಾನಪದ ವಸ್ತುಸಂಗ್ರಹಾಲಯಗಳು. ಫಿನ್ಲೆಂಡಿನಲ್ಲಿ ರಾಷ್ಟ್ರೀಯ ಮಟ್ಟದ ಬಯಲು ವಸ್ತುಸಂಗ್ರಹಾಲಯವಿದೆ. ಇಲ್ಲಿ ಎಲ್ಲ ಬಗೆಯ ಸಾಧನಸಾಮಗ್ರಿಗಳನ್ನೂ ಕಾಣಬಹುದಾಗಿದೆ. ಹೀಗೆ ಸೋವಿಯೆತ್ ದೇಶ, ಇಂಗ್ಲೆಂಡ್, ಮುಂತಾದ ದೇಶಗಳಲ್ಲಿಯೂ ಈ ವಸ್ತುಸಂಗ್ರಹಾಲಯಗಳನ್ನು ನೋಡಬಹುದು.

	ಭಾರತದಲ್ಲಿಯೂ ಇಂಥ ಒಂದು ಸಂಗ್ರಹಾಲಯದ ವ್ಯವಸ್ಥೆ ತಕ್ಕಮಟ್ಟಿಗೆ ನಡೆಯುತ್ತ ಬಂದಿದೆ. ಖಾಸಗಿಯಾಗಿ ಸ್ಥಾಪಿತವಾಗಿರುವ ಎರಡು ಜನಪದ ಕಲಾವಸ್ತುಸಂಗ್ರಹಾಲಯಗಳು ಪುಣೆಯಲ್ಲಿವೆ. ಡಿ.ಜಿ.ಕೇಳ್ಕರ್ ಮತ್ತು ಎಸ್.ಆರ್.ಪೋತ್‍ದಾರ್ ಇವರು ಆ ಸಂಗ್ರಹಾಲಯದ ಒಡೆಯರು. ಮುಂಬಯಿಯಲ್ಲಿರುವ ವಿಕ್ಟೋರಿಯ ಮತ್ತು ಆಲ್ಬರ್ಟ್ ಮ್ಯೂಸಿಯಂ, ಮದ್ರಾಸಿನ ಗೌರ್ನಮೆಂಟ್ ಮ್ಯೂಸಿಯಂ, ವಾರಾಣಸಿಯಲ್ಲಿರುವ ಭಾರತ ಕಲಾಭವನ, ಅಲಹಾಬಾದಿನ ಫೋಕ್ ಆರ್ಟ್ ಮ್ಯೂಸಿಯಂ. ದೆಹಲಿಯ ನ್ಯಾಷನಲ್ ಮ್ಯೂಸಿಯಂ, ಕಲ್ಕತ್ತದ ಇಂಡಿಯನ್ ಗ್ಯಾಲರಿ ಮುಂತಾದ ಸಂಗ್ರಹಾಲಯಗಳಲ್ಲಿ ಜನಪದ ಕಲಾವಸ್ತುಗಳು ಸಾಕಷ್ಟು ಸಂಖ್ಯೆಯಲ್ಲಿ ಸಂಗ್ರಹವಾಗಿದ್ದರೂ ಅವಕ್ಕೆಂದೇ ಮೀಸಲಾದ ವಸ್ತುಸಂಗ್ರಹಾಲಯಗಳಾಗಿಲ್ಲ.

	ಭಾರತದಲ್ಲಿನ ಜಾನಪದ ಸಂಗ್ರಹಾಲಯಗಳನ್ನು ಕುರಿತು ಪರಿಶೀಲಿಸುವಾಗ ವಯಸ್ಸಿನಲ್ಲಿ ಕಿರಿದಾದರೂ ಗುರಿಯ ಸಾಧನೆಯಲ್ಲಿ ಹಿರಿಯತನ ಗಳಿಸಿರುವ ದಕ್ಷಿಣ ಭಾರತದಲ್ಲಿ ಮೊದಲನೆಯದೆನಿಸುವ ಮೈಸೂರಿನ ಕನ್ನಡ ಆಧ್ಯಯನ ಸಂಸ್ಥೆಗೆ ಸೇರಿದ ಜಾನಪದ ವಸ್ತುಸಂಗ್ರಹಾಲವನ್ನು ಮರೆಯುವಂತಿಲ್ಲ.					(ಡಿ.ಕೆ.ಆರ್.)

ಕರ್ನಾಟಕದಲ್ಲಿ ಇಂಥ ಒಂದು ವಸ್ತುಸಂಗ್ರಹಾಲಯವನ್ನು ಸ್ಥಾಪಿಸಿದ ಕೀರ್ತಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ದೇ.ಜವರೇಗೌಡ ಅವರಿಗೆ ಸಲ್ಲಬೇಕು. ದೇಜಗೌ ಅವರು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದಾಗ ತಮ್ಮ ಪತ್ನಿಯವರು ಬಳಸುತ್ತಿದ್ದ ಒಡವೆಯನ್ನೇ ಪ್ರಥಮ ಬಾರಿಗೆ ದಾನವಾಗಿ ನೀಡಿ ಜಾನಪದ ವಸ್ತುಸಂಗ್ರಹಾಲಯವನ್ನು ಬೆಳೆಸಲು ಹಾದಿ ಮಾಡಿಕೊಟ್ಟರು. ಜೊತೆಗೆ ಅವರಿಗೆ ಬಂದ ನೆಹರು ಪ್ರಶಸ್ತಿಯ ಹಣವನ್ನೆಲ್ಲ ಈ ವಸ್ತುಸಂಗ್ರಹಾಲಯಕ್ಕೆ ಮೀಸಲಿಟ್ಟರು. ಇವರ ನಿರ್ದೇಶನದಲ್ಲಿ ಆರಂಭವಾದ ಈ ಸಂಗ್ರಹಾಲಯ ಬೇಗ ಬೆಳವಣಿಗೆಯನ್ನು ಸಾಧಿಸಿತು. ಸಂಗ್ರಹ ಕೆಲಸ ಜಿಲ್ಲೆಯಿಂದ ಜಿಲ್ಲೆಗೆ ಬಹಳ ತ್ವರಿತ ಗತಿಯಲ್ಲಿ ಸಾಗಿತು. ಅಲ್ಪಕಾಲದಲ್ಲಿಯೇ ಅಪೂರ್ವ ವಸ್ತುಗಳ ಸಂಗ್ರಹಣೆಯಾಯಿತು. ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯ ಹಳೆಯ ಕಟ್ಟಡ ಇದಕ್ಕಾಗಿ ಮೀಸಲಾಯಿತು.

	ಈ ಸಂಗ್ರಹಾಲಯದಲ್ಲಿ ಈಗಾಗಲೇ ಸುಮಾರು ಐದು ಸಾವಿರಕ್ಕೂ ಮೀರಿ ಜಾನಪದ ವಸ್ತುಗಳನ್ನು ಸಂಗ್ರಹಿಸಿ ಶಾಸ್ತ್ರೀಯವಾಗಿ ವಿಭಜಿಸಿ ಪ್ರದರ್ಶಿಸಲಾಗಿದೆ. (ಈ ಲೇಖನದಲ್ಲಿಯ ಚಿತ್ರಗಳು ಇಲ್ಲಿನ ಕೆಲವು ಅಪೂರ್ವ ವಸ್ತುಗಳನ್ನು ಉದಾಹರಿಸುತ್ತವೆ.) ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ, ಬಿಜಾಪುರ, ಬೀದರ್, ಬಳ್ಳಾರಿ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳ ಕ್ಷೇತ್ರಕಾರ್ಯವನ್ನು ನಿರ್ದೇಶಕರಾದ ಹಾ.ಮಾ.ನಾಯಕ, ವಿಭಾಗದ ಮುಖ್ಯಸ್ಥ ಜೀ.ಶಂ.ಪರಮಶಿವಯ್ಯನವರ ಮಾರ್ಗದರ್ಶನದಲ್ಲಿ ಈ ಸಂಗ್ರಹಾಲಯದ ಕ್ಯುರೇಟರ್ ಆಗಿರುವ ಕಲಾವಿದ ಪಿ.ಆರ್. ತಿಪ್ಪೇಸ್ವಾಮಿಯನರು ಶ್ರಮಿಸಿ ಸಂಗ್ರಹ ಕಾರ್ಯವನ್ನು ಉತ್ತಮ ರೀತಿಯಲ್ಲಿ ಮಾಡಿದ್ದಾರೆ. ಇಲ್ಲಿನ ವಸ್ತುವಿಶೇಷಗಳಲ್ಲಿ ಬಹುಪಾಲು ದಾನ ರೂಪದಲ್ಲಿ ಬಂದವು. ನಾಡಿನ ಸಂಸ್ಕøತಿಯ ಅಧ್ಯಯನದಲ್ಲಿ ಈ ವಸ್ತು ಸಂಗ್ರಹಾಲಯ ಅತ್ಯಂತ ಗಣ್ಯವಾದ ಪಾತ್ರವನ್ನು ಬಹಿಸಬಲ್ಲದು ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕದ, ಭಾರತದ ಹಾಗೂ ಹೊರದೇಶಗಳ ಅನೇಕ ಗಣ್ಯರೂ ವಿದ್ವಾಂಸರೂ ಈ ಸಂಗ್ರಹಾಲಯವನ್ನು ನೋಡಿ ತಮ್ಮ ಮೆಚ್ಚಿಗೆಯನ್ನು ವ್ಯಕ್ತಪಡಿಸಿದ್ದಾರೆ.

	ಇಲ್ಲಿ ಸಂಗ್ರಹಿಸಿರುವ ವಸ್ತುಗಳನ್ನು ಯಕ್ಷಗಾನ ಸಾಧನಗಳು, ಸೂತ್ರದ ಗೊಂಬೆಗಳು, ಚರ್ಮದ ಗೊಂಬೆಗಳು, ಕೀಲುಗೊಂಬೆಗಳು, ನವರಾತ್ರಿ ಗೊಂಬೆಗಳು, ಗೌರಿ ಗೊಂಬೆಗಳು, ಲೋಹದ ಸಾಮಗ್ರಿಗಳು, ವಾದ್ಯವಿಶೇಷಗಳು, ಧಾರ್ಮಿಕ ಸಾಮಗ್ರಿಗಳು, ಚಿತ್ರಗಳು, ಆಯುಧ ವಿಶೇಷಗಳು, ವೃತ್ತಿ ಸಾಮಗ್ರಿಗಳು, ಹೆಣಿಗೆ ಸಾಮಗ್ರಿಗಳು, ನಿತ್ಯಬಳಕೆಯ ವಸ್ತುಗಳು, ವಸ್ತ್ರಾಭರಣಗಳು, ವ್ಯವಸಾಯ ಸಾಧನಗಳು - ಎಂಬುದಾಗಿ ಅನೇಕ ಭಾಗಗಳಾಗಿ ವಿಂಗಡಿಸಿ ಓರಣವಾಗಿ ಜೋಡಿಸಲಾಗಿದೆ.

	ಕರ್ನಾಟಕದ ನಾನಾ ಭಾಗಗಳಲ್ಲಿ ಪ್ರಚಲಿತವಾಗಿರುವ ಯಕ್ಷಗಾನ ಬಯಲಾಟದ ಕಿರೀಟ, ಭುಜಕೀರ್ತಿ, ಎದೆಹಾರ, ವೀರಗಾಸೆ ಮುಂತಾದ ಕಲಾತ್ಮಕ ವಸ್ತುಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಕೂಗಲುಬಳ್ಳಿಯಲ್ಲಿ ರಚಿತವಾದ ಹನುಮಂತನ ಕಿರೀಟ ಇಲ್ಲಿನ ಅಪೂರ್ವ ವಸ್ತುಗಳಲ್ಲೊಂದು. ಇದು ಉತ್ತರ ಕನ್ನಡ ಜಿಲ್ಲೆಯ ಕೊಡುಗೆ. ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಧರ್ಮಸ್ಥಳ ಮೇಳದವರು ಬಳಸಿದ ಮರದ ಕಿರೀಟಗಳು, ಗದೆಗಳು ಮುಂತಾದವು ಕಲಾದೃಷ್ಟಿಯಿಂದ ಹಿರಿಯ ಸ್ಥಾನವನ್ನು ಪಡೆದಿವೆ. ಈಚೆಗೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಸಮೀಪದ ತೊಗರ್ಸಿ ಗ್ರಾಮದ ಶ್ರೀಮಠದಲ್ಲಿ ದೊರೆತ ಮರದ ಕಿರೀಟ ಭುಜಕೀರ್ತಿಗಳು ಆ ಸುತ್ತಿನ ಯಕ್ಷಗಾನ ಬಯಲಾಟದ ಕುರುಹನ್ನು ಸಾರುತ್ತವೆ.

	ಈ ಸಂಗ್ರಹಾಲಯದ ಸೂತ್ರದ ಬೊಂಬೆಗಳದ್ದು ಉತ್ತಮ ಆಕರ್ಷಣೆ ಎನ್ನಬಹುದು. ಬಳ್ಳಾರಿ, ತುಮಕೂರು, ಮಂಡ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗೊಂಬೆಗಳನ್ನು ಇಲ್ಲಿ ಕಾಣಬಹುದು. ಅವುಗಳ ರಚನೆ, ವರ್ಣಲೇಪ, ವಸ್ತ್ರಾಲಂಕರಣ ಎಲ್ಲವೂ ಅಪೂರ್ವವಾಗಿದ್ದು ಅವು ಒಂದೊಂದು ಸಂಪ್ರದಾಯದ ಪ್ರತೀಕಗಳೆನಿಸಿವೆ. ಬೆಳ್ಳೂರು ಹಾಗೂ ತಿಪಟೂರಿನ ಸೂತ್ರದ ಗೊಂಬೆಗಳ ಮಾಟ, ವರ್ಣಸಂಯೋಜನೆ ಅಮೋಘವಾದುದು. ಕುಂದಾಪುರದ ದೇವಣ್ಣ ಕಾಮತರ ಗೊಂಬೆಗಳು ಪ್ರೇಕ್ಷಕರನ್ನು ಬಹುಬೇಗ ಆಕರ್ಷಿಸುತ್ತವೆ. ಹದಿನೆಂಟು ಅಂಗುಲದ, ಕುಣಿವ, ಕುತೂಹಲಕಾರಿ ಕೀಲುಗೊಂಬೆಗಳು ಕನ್ನಡ ನಾಡಿನಲ್ಲಿ ಎಲ್ಲೂ ಕಾಣದ ವಿಶಿಷ್ಟ ಗುಣಗಳನ್ನು ಪಡೆದಿವೆ. ಗಾನಕ್ಕೆ ತಕ್ಕಂತೆ ಗದ್ದ ಚಲಿಸಿ, ನೃತ್ಯ ಮಾಡುವ ಈ ಪುಟ್ಟ ಗೊಂಬೆಗಳು ಬಹು ಆಕರ್ಷಕ.

	ಯಕ್ಷಗಾನ ಸಂಪ್ರದಾಯದ ನಾಟಕ ಪ್ರಕಾರಕ್ಕೆ ಸೇರುವ ತೊಗಲುಗೊಂಬೆಗಳು ಇಲ್ಲಿ ಪ್ರಮುಖ ಸ್ಥಾನವನ್ನು ಗಳಿಸಿವೆ. ಭಾರತೀಯ ಚಿತ್ರಕಲೆಯ ಉನ್ನತ ಪರಂಪರೆಯನ್ನು ಸಾರುವ ಈ ಗೊಂಬೆಗಳು ತಮ್ಮ ರೇಖಾವಿನ್ಯಾಸಕ್ಕೆ, ಕಲ್ಪನಾರಮ್ಯತೆಗೆ, ವರ್ಣವೈಖರಿಗೆ ಹೆಸರಾಗಿವೆ. ಕರಾವಳಿ ಮತ್ತು ಮಲೆನಾಡು ಭಾಗಗಳ ಹೊರತು ಕರ್ನಾಟಕದ ಉಳಿದೆಲ್ಲ ಕಡೆಗಳಲ್ಲೂ ಜೀವಂತವಾಗಿರುವ ಕಲೆ ತೊಗಲುಬೊಂಬೆಯಾಟ, ಅಲ್ಲದೆ, ರಾಮಾಯಣ, ಮಹಾಭಾರತ, ಭಾಗವತಗಳಿಗೆ ಸಂಬಂಧಪಡುವ ಚರ್ಮದ ಮೇಲೆ ರಚಿತವಾಗಿರುವ ಈ ಕೃತಿಗಳು ಉನ್ನತ ಕಲಾಸಿದ್ಧಿಯನ್ನು ಪಡೆದಿವೆ.

	ಜನಪದ ನೃತ್ಯಗಳಲ್ಲಿ ಮೇಳಗಳಲ್ಲಿ ಉತ್ಸವಗಳಲ್ಲಿ ಉಪಯೋಗಿಸುವ ವಿವಿಧ ರೀತಿಯ ವಾದ್ಯ ವಿಶೇಷಗಳು ಇಲ್ಲಿವೆ. ಜೋಗಿಗಳ ಕಿನ್ನರಿ, ಜುಂಜಪ್ಪನ ಗಣೆ, ಎಲ್ಲಮ್ಮನ ಚೌಡಿಕೆ, ಬೀರಪ್ಪನ ಡೊಳ್ಳು, ಗೊಂದಲಿಗರ ಸಂಬಾಳ, ಹಾಲಕ್ಕಿ ಗೌಡರ ಸುಗ್ಗಿ ಕುಣಿತದ ಗುಮ್ಮಟೆ, ರಣಕಹಳೆ, ಕೊಂಬು, ಜೀರಂಗಾಳೆ, ಪುಂಗಿ, ಸೀನಿ, ಚಂಡೆ, ತಾನೆ, ದಿಮ್ಮಿ, ತಮಟೆ, ಕರಡೆ, ಬುಡುಬುಡುಕೆ ಚುಡುಬುಡಿ, ಹರೆ, ಯರವರ ದುಡಿ, ಕಂಸಾಳೆ ಹೆಳವರ ಗಂಟೆ, ಜೇನುಕುರುಬರ ದೇವರು ಕರೆಸುವ ತೊರಪೆ, ನೀಲಗಾರ ಸಂಪ್ರದಾಯದ ತಂಬೂರಿ-ಹೀಗೆ ನಾನಾ ನಮೂನೆಯ ನಾನಾ ಸಂಪ್ರದಾಯದ ವಾದ್ಯಗಳನ್ನು ಇಲ್ಲಿ ಗಮನಿಸಬಹುದು. ಬಹುಪಾಲು ಇಲ್ಲಿಯ ವಾದ್ಯಗಳಿಗೆ ಎಮ್ಮೆ, ಮೇಕೆ, ಎತ್ತು, ಕೋತಿ, ಸಮುದ್ರತೀರದ ಕಪ್ಪೆ ಹಾಗೂ ಉಡ ಮುಂತಾದವುಗಳ ಚರ್ಮವನ್ನೇ ಬಳಸಲಾಗಿದೆ.

	ಮರದ ಹೊಟ್ಟಿನಿಂದ ತಯಾರಿಸಿದ ದಸರ ಮತ್ತು ಗೌರಿ ಗೊಂಬೆಗಳು ವಿವಿಧ ಬಣ್ಣಗಳಿಂದ ಕೂಡಿ ಸ್ವಾಭಾವಿಕವಾಗಿ ತೋರುತ್ತವೆ. ಚಾಮರಗಿತ್ತಿ, ವೇಣುಗೋಪಾಲ, ತಾಯಿಮಗು, ಹನುಮಂತ, ಕಾಮದೇವ, ಅಂಬೆಗಾಲ ಕೃಷ್ಣ, ಸಂನ್ಯಾಸಿ, ಜಟ್ಟಿಗಳು, ನಾಯಿಂದ, ಅಗಸ, ಹಲ್ಲುಬೀರ, ಗೋಪಿಕಾಸ್ತ್ರೀಯರೊಡನೆ ಇರುವ ಕೃಷ್ಣನ ರಾಸಲೀಲೆ ಗೊಂಬೆ ಮೊದಲಾದವು ಇಲ್ಲಿನ ಆಕರ್ಷಣೀಯ ವಸ್ತುಗಳು.

	ತಲೆಭೂತ (ಸೋಮ), ಕೈಭೂತ (ಹಲಗಿ) ಮುಂತಾದವು ವಿಶಿಷ್ಟ ದೈವಗಳು. ಕೊಡಗಿನ ಅಯ್ಯಪ್ಪಸ್ವಾಮಿ ಸಂಪ್ರದಾಯದ ಕುದುರೆ, ಬೇಟೆನಾಯಿಗಳು, ಮಣ್ಣಿನಕಲಾಮಯ ಪ್ರತಿರೂಪದ ದೈವಗಳು, ಉತ್ತರಕನ್ನಡ ಜಿಲ್ಲೆಯಲ್ಲಿ ಊರಿಂದ ಊರಿಗೆ ಸಾಗುವ ಅಡುಗೋಲಜ್ಜಿ ಮರದ ಗೊಂಬೆ ಮತ್ತು ದೇವಾಲಯಗಳಲ್ಲಿ ಪೂಜಿಸುವ ಭರ್ಗಿಚೋಮ, ಹುಲಿದೇವರು, ಮೈಲಾರ ದೇವರ ಪವಾಡದ ಸಾಮಗ್ರಿಗಳು ಇಲ್ಲಿವೆ. ಈಚೆಗೆ ಶಿವಮೊಗ್ಗ ಜಿಲ್ಲೆಯ ತೊಗರ್ಸಿಯ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯದಲ್ಲಿ ಸಂಗ್ರಹಿಸಲಾದ ಮರದ ದ್ವಾರಪಾಲಕ ವಿಗ್ರಹಗಳು ಎಂಟು ಅಡಿ ಉದ್ದವಾಗಿದ್ದು ಹೊಯ್ಸಳ ಸಂಪ್ರದಾಯದ ಕಲೆಯನ್ನು ಪ್ರದರ್ಶಿಸುತ್ತವೆ. ಅಲ್ಲಿನ ಮಳೀಮಠದಲ್ಲಿ ಸಂಗ್ರಹಿಸಲಾದ ಏಳು ಮರದ ವಿಗ್ರಹಗಳು ಬೇಲೂರು ಶಿಲಾಬಾಲಿಕೆಯರ ಕುಸುರಿನ ಕಲೆಯನ್ನು ನೆನಪಿಗೆ ತರುತ್ತವೆ. ಅಂತೆಯೇ ಸಾಗರದ ವಿಸರ್ಜಿತ ಶ್ರೀ ಮಾರಿಕಾಂಬಾ ದೇವತೆಯ ಮರದ ದೊಡ್ಡ ಮೂರ್ತಿಯನ್ನು ಈಚೆಗೆ ಸಂಗ್ರಹಿಸಲಾಗಿದೆ.

	ವಿವಿಧ ಲೋಹಗಳಲ್ಲಿ ಮಾಡಿದ ನಾನಾ ರೀತಿಯ ಕಬ್ಬಿಣದ ಕೀಲಿಗಳು, ಸುಣ್ಣಕಾಯಿಗಳು, ಅಡಕತ್ತಿಗಳು, ಕುಟ್ಟಾಣಿಗಳು, ಊಟದ ತಣಿಗೆಗಳು, ಗಿಂಡಿಗಳು, ಪೀಕದಾನಿಗಳು, ಕೋಳಿ ಅಂಕದ ಕತ್ತಿಗಳು, ಭೂತಾರಾಧನೆಯ ಮೂರ್ತಿಗಳು, ಕೊಡಗಿನ ಬಾಲುರುಳಿ, ಆನೆಗಂಟೆ, ಎಣ್ಣೆ, ಗುಜ್ಜಣಿಗೆಗಳು, ದೀವಟಿಗೆಗಳು ಮುಂತಾದವು ಈ ಸಂಗ್ರಹಾಲಯದ ಇನ್ನೊಂದು ವೈಶಿಷ್ಟ್ಯ.

	ವಿವಿಧ ಪ್ರದೇಶಗಳಲ್ಲಿ ಪ್ರಚಲಿತವಾಗಿರುವ ಕಳಸಿಗೆ, ಪದೆ, ಪಡಿ ಮುಂತಾದ ಅಳತೆಯ ಸಾಧನಗಳನ್ನೂ ನಾನಾ ನಮೂನೆಯ ತೇವಟಿಗೆ ಮಣೆಗಳನ್ನೂ ಶಾವಿಗೆ ಒರಳು, ಬಿದಿರಂಡೆ, ಸಾಂಬಾರ್, ಬಟ್ಟಲುಗಳು, ತೆಂಗಿನ ಕರಟದ ಬಟ್ಟಲುಗಳು, ಅಪೂರ್ವದ ನೆಲುವುಗಳು, ಸಿಕ್ಕಗಳು, ತಾಯಿ ಮಕ್ಕಳ ನೆಲುವುಗಳು, ಕವಳದ ಸಿಬ್ಬೆ ಮುಂತಾದುವು ನಿತ್ಯಬಳಕೆಯ ವಸ್ತು ವಿಭಾಗದಲ್ಲಿವೆ.

ಎತ್ತುಗಳ ಶೃಂಗಾರಕ್ಕೆ ಬಳಸಲಾಗುವ ಅನೇಕ ಬಗೆಯ ಹಣೆಪಟ್ಟಿಗಳು, ಮುಖರಂಭಗಳು, ಕೊಂಬುಕಳಸಗಳು, ಕೊಂಚೌರ, ಮಾಗಾಯಿಗಳು ಗೊಳಗಳೆ, ಗಂಟೆಸರಗಳು, ತಟ್ಟೆಗಳು, ಲೊಟಗ, ಎಂಟು ಜೊತೆ ಎತ್ತುಗಳನ್ನು ಕಟ್ಟಿ ವ್ಯವಸಾಯ ಮಾಡುವ ಬೆಳಗಾಂವಿ ಕಡೆಯ ಅಪೂರ್ವರಾಟೆ (ನೇಗಿಲು), ಇದಕ್ಕೆ ಬಳಸುವ ಚರ್ಮದ ಮಿಣಿ ಹಾಗೂ ಎತ್ತಿನ ಕೊರಳಿಗೆ ನೊಗ ಬಿಗಿಯುವ ಸಪ್ಪತ್ತಿಗೆ, ಬಂಡಿಯ ಹುಲ್ಲು ಬಿಗಿಯುವ ಗಡಗಡೆ, ನೀರು ತರುವಲಗಳಿ, ಹೋರಿ ಬೀಜ ಹೊಡೆಯುವ ಹೋರುಗೋಲು, ದನಗಳ ಗಂಟಲಿನಲ್ಲಿ ಮುಳ್ಳು ಹೊರತೆಗೆಯವ ಕೈನಳಗ, ಅಕ್ಕಿ ಮೂಡೆ ಕಟ್ಟುವ ಕೋದಂಟೆ, ನಾಗರ ಸೆಡೆ ನೊಗ, ನೀರು ಎತ್ತುವ ಬುದ್ಧಿವಂತ, ಮಂತ್ರದ ಬಳ್ಳಿ, ಧಾನ್ಯದ ರಾಶಿಗೆ ಮುದ್ರೆ ಹಾಕುವ ಶ್ರೀಮುದ್ರೆಕೋಲು, ಚಬಕ, ಕವಣೆಗಳು, ಬೋರ್ಗಣೆ ಮುಂತಾದುವನ್ನು ಇಲ್ಲಿ ಕಾಣಬಹುದು. ಇಷ್ಟೇ ಅಲ್ಲದೆ, ಅನೇಕ ರೀತಿಯ ಕಲಾತ್ಮಕ ಹೆಣಿಗೆ ಸಾಮಾನುಗಳು, ಮಣ್ಣಿನ ಹಣತೆಗಳು, ಬುದ್ದಲಿಗಳು ಭಸ್ಮದ ಮರೈ, ಉಪ್ಪಿನ ಕಾಯಿ ಮರಗೆ, ತುಪಾಕಿ ಮದ್ದಿನ ಕುಡಿಕೆಗಳು, ಹಿಟ್ಟು ತುಂಬುವ ಅನ್ನದ ಗಡಿಗೆ, ಗುಡಾಣಗಳು; ಜೂಜಿನ ಗಡಿಗೆ ಮುಂತಾದವು ; ಆನೆ ಹುಲ್ಲು ಕೊಯ್ಯುವ ದಂತದ ಹಿಡಿಯುಳ್ಳ ದರಾತಿ, ಏಡಿಕತ್ತಿ, ಮೀನುಕತ್ತಿ, ವೀರಕತ್ತಿ, ಪೀಚುಕತ್ತಿ, ಮಲ್ಲಕತ್ತಿ, ಬಲಿಮಚ್ಚು, ಮರಿಕುಡಲ, ಪುಲಿಯಕತ್ತಿ, ಅಡಕತ್ತಿ, ಡೊಕ್ಕುರೆಪೆ, ವರನ ಕಠಾರಿ, ಭೂತನೇಮದ ಕತ್ತಿ, ಪರಶು ಮುಂತಾದ ಆಯುಧಗಳು : ವಿಜಯನಗರ, ಕೊಡಗು ಹಾಗೂ ಬಹುಮಂದಿ ಅರಸರ ಕಾಲದ ಸಿಕ್ಕಗಳು (ನಾಣ್ಯ) ; ಸುಗಂಧ ದ್ರವ್ಯದ ಅತ್ತರ್ ದಾನಿಗಳು; ನೇಯ್ಗೆಸಾಮಗ್ರಿಗಳು; ಹಣ ಸಂಗ್ರಹಿಸುವ ಹಮ್ಮಿಣಿಗಳು, ಪವಿತ್ರ ಕೌದಿಗಳು ; ಕೋರಿನಿಷಾನಿ, ಪರ್ವತರದಟ್ಟಿ, ಬಗಲ ಬಂದಿ, ಲಂಬಾಣೀ ಹೆಂಗಸರ ಹಾಗೂ ಕೊಡವರ ಉಡುಗೆ ತೊಡುಗೆ, ಬಚ್ಚೆಕಾನೆ ದೋತ್ರ ಮುಂತಾದವನ್ನೂ ಸಂಗ್ರಹಿಸಲಾಗಿದೆ.

ಕರ್ನಾಟಕ ಚಿತ್ರಕಲೆಗೆ ಇಲ್ಲಿ ಒಂದು ಮುಖ್ಯ ಸ್ಥಾನಸಿಕ್ಕಿದೆ. ಬೂಟಾರೇಖೆಗಳ ಮೇಲೆ ಸ್ವರ್ಣ ಲೇಪನದ ಕುಸುರಿನ ಚಿತ್ರಕಲೆ, ಪಂಚನಾರಿ ತುರಗ, ಮುಮ್ಮಡಿ, ಶಿವಪಾರ್ವತಿ ಕಲ್ಯಾಣ, ಗೋಪಾಲ ಮುಂತಾದ ಜಲವರ್ಣಚಿತ್ರಗಳು, ಓಲೆಗರಿಯ ಮೇಲೆ ಬಿಡಿಸಿರುವ ಅತಿ ಸೂಕ್ಷ್ಮ ರೇಖಾಚಿತ್ರಗಳು, ಗಿಡಮೂಲಿಕೆಗಳ ರಸದಿಂದ ರಚಿತವಾದ ಕಲಂಕಾರಿ ಚಿತ್ರಗಳು, ವಿವಿಧ ವರ್ಣಗಳ ಪುಟಾಣಿ ಮಣಿಗಳ ಹೆಣೆಗೆ, ಕಲಾಕೃತಿಗಳು, ನಾಲ್ಕು ಅಡಿ ಉದ್ದನೆಯ ಸೋರೆಕಾಯಿ ಮೇಲೆ ಕೃಷ್ಣಲೀಲೆಯ ಚಿತ್ರಗಳು ಈ ವಿಭಾಗದಲ್ಲಿ ಗಮನಿಸಬೇಕಾದ ಕಲಾರತ್ನಗಳು.
ಇತ್ತೀಚೆಗೆ ಸಂಗ್ರಹವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಮೆಕ್ಕೆಕಟ್ಟೆಯ ನಂದಿಕೇಶವ ಸಂಪ್ರದಾಯದ 600 ವರ್ಷಗಳ ಹಿಂದಿನ ಸುಮಾರು ಐವತ್ತು ಮರದ ಗೊಂಬೆಗಳು ಈ ಸಂಗ್ರಹಾಲಯದ ಒಂದು ದೊಡ್ಡ ನಿಧಿ. ಸಮುದ್ರಕ್ಕೆ ವಿಸರ್ಜಿಸಲಿದ್ದ ಈ ಅಪೂರ್ವದ ಬೆಲೆ ಬಾಳುವ ಗೊಂಬೆಗಳು ಕಲಾದೃಷ್ಟಿಯಿಂದಲೂ ಪ್ರಾದೇಶಿಕ ಹಿನ್ನೆಲೆಯ ದೃಷ್ಟಿಯಿಂದಲೂ ಇಲ್ಲಿ ಸಂರಕ್ಷಿಸಲಾಗಿದೆ. ಅಮೋಘವಾದ 18 ಅಡಿ ಎತ್ತರದ ಗೊಂಬೆಯೊಂದು ಕೊಳಕೆಬೈಲ್ ಬಂಧುಗಳ ಕಾಣಿಕೆಯಾಗಿದೆ.

	ಶಿಕಾರಿಪುರಕ್ಕೆ ಸಮೀಪದಲ್ಲಿರುವ ಶಿವಯೋಗಿ ಮಂದಿರದ ಶ್ರೀಗಳವರಿಂದ ಸಂಗ್ರಹಿಸಲಾದ ಗೊಂಬೆಗಳ ಮರದ ಮಂಚ ಅಪೂರ್ವವಾದುದು. ಇದರಲ್ಲಿ ಗಾಜಿನ ಚೂರುಗಳನ್ನು ಜೀರಿಂಬೆ ರೆಕ್ಕೆಗಳನ್ನೂ ಜೊತೆಗೆ ಗಾಜಿನ ವರ್ಣಚಿತ್ರಗಳನ್ನೂ ಸೇರಿಸಲಾಗಿದೆ. ಈ ರೀತಿಯ ಕಲಾತ್ಮಕ ಗೊಂಬೆ ಕೂರಿಸುವ ಮಂಟಪ; ಹೊನ್ನಾಳಿಯ ಹಿರೇಕಲ್ಮಠದ ಹದಿನಾರು ಅಡಿ ಉದ್ದದ ಬತ್ತಿಕೋವಿ, ಅಲ್ಲದೆ ಪಿರಂಗಿ, ಉಕ್ಕಿನ ಕವಚ, ಹುಲಿ ಬೇಟೆಯ ಬಿಲ್ಲು ಮುಂತಾದುವು ಯೋಗ್ಯ ಸಂಗ್ರಹವೆನಿಸಿವೆ.			(ಪಿ.ಆರ್.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ